ಬಳ್ಳಾರಿ : ಜಿಲ್ಲೆಯಲ್ಲಿ 12 ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಇಂಜಿನೀಯರ್ ಗ್ರೇಡ್-1 ಹಾಗೂ ವಿವಿಧ ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳಿಗೆ ಫೆ.25 ರಂದು ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಕನ್ನಡ ಕಡ್ಡಾಯ ಭಾಷಾ ಪರೀಕ್ಷೆ ಮತ್ತು ಫೆಬ್ರವರಿ .26ರಂದು ಬೆಳಿಗ್ಗೆ 10ರಿಂದ 11.30 ರವರೆಗೆ ಸಾಮಾನ್ಯ ಪರೀಕ್ಷೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 4 ರವರೆಗೆ ನಿರ್ದಿಷ್ಟ ಪತ್ರಿಕೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ. ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲೂ 200 ಮೀಟರ್ ಒಳಗಿನ ಆವರಣವನ್ನು ನಿರ್ಭಂದಿತ ಪ್ರವೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನಲ್ಲಿರುವ ಜೆರಾಕ್ಸ್ ಸೆಂಟರ್ ಹಾಗೂ ಇಂಟರ್ನೆಟ ಸೆಂಟರ್ ಗಳನ್ನು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ತೆರೆಯದಂತೆ ಸೂಚಿಸಿರುತ್ತಾರೆ. ಸದರಿ ಪ್ರದೇಶದಲ್ಲಿ ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿ ಗುಂಪುಗಳ ಪ್ರವೇಶ ನಿಷೇಧಿಸಲಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.