ಬಳ್ಳಾರಿ : ಬಿಜೆಪಿ ಪಕ್ಷದಲ್ಲಿನ ಉನ್ನತ ನಾಯಕ ಸಚಿವ ಶ್ರೀರಾಮುಲು ಅವರಿಗೆ ಈ ಚುನಾವಣೆಯಲ್ಲಿನ ಸೋಲು ತೀವ್ರ ಮುಖಭಂಗವನ್ನು ಉಂಟು ಮಾಡಿದೆ ಎನ್ನಬಹುದು.
ಪಕ್ಷ, ರಾಜಕಾರಣದಿಂದ ಎರಡುವರೆ ದಶಕಗಳ ಕಾಲ ದಿಂದ ಸಾಗಿ ಬಂದ ಶ್ರೀರಾಮುಲು ಅವರಿಗೆ 1999ರಲ್ಲಿ ಮೊದಲ ಸೋಲು ಕಂಡರೂ ಅದು ಗೆಲುವಿನ ಮೆಟ್ಟಿಲಾಗಿತ್ತು. ಅದಕ್ಕಾಗಿ 2004ರಲ್ಲಿ ಮೊದಲ ಬಾರಿಗೆ ಮುಂಡ್ಲೂರು ಮನೆತನದ ದಿವಾಕರ ಬಾಬು ವಿರುದ್ಧ ತೊಡೆ ತಟ್ಟಿ ಗೆದ್ದರು.
ಅಷ್ಟೇ ಅಲ್ಲದೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದರು. 2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಿಂದ ಗ್ರಾಮೀಣ ಕ್ಷೇತ್ರಕ್ಕೆ ಬಂದು ಭರ್ಜರಿ ಜಯಗಳಿಸಿದರು. ಅಕ್ರಮ ಗಣಿಗಾರಿಕೆ ಆರೋಪದ ಲೋಕಾಯುಕ್ತ ವರದಿಯಲ್ಲಿ ತಮ್ಮ ಹೆಸರಿದ್ದಕ್ಕೆ ಸ್ವಾಭಿಮಾನಕ್ಕೆ ಧಕ್ಕೆ ಎಂದು ಬಿಜೆಪಿಗೆ ರಾಜಿನಾಮೆ ನೀಡಿ 2011ರಲ್ಲಿ ನಡೆದ ಇದೇ ಕ್ಷೇತ್ರದ ಉಪ ಚುನಾವಣೆಯಲ್ಲೂ ಗೆದ್ದು ಬೀಗಿದರು. 2013ರಲ್ಲಿ ಬಿ.ಎಸ್.ಆರ್. ಪಕ್ಷ ಕಟ್ಟಿ ತಾವು ಸೇರಿದಂತೆ ರಾಜ್ಯದ ನಾಲ್ಕು ಕಡೆ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದರು. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತು. ಇದರಿಂದ ಹೆದರಿದಂತೆ 2018ರಲ್ಲಿ ಮೋಕಾಲ್ಮೂರು ಕ್ಷೇತ್ರದಿಂದ ಆಯ್ಕೆಯಾದರು. ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಸೋತರು. ಅಲ್ಲಿ ಸ್ಪರ್ಧಿಸಿ ಕುರುಬ ಸಮುದಾಯದ ವಿರೋಧ ಕಟ್ಟಿಕೊಂಡರು.
ಈ ಬಾರಿ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸೋಲಿನ ಭೀತಿ ಇದೆ ಎಂಬ ಸರ್ವೆ ವರದಿ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಅಲ್ಲಿ ಇಲ್ಲಿ ಎನ್ನುತ್ತ ಕೊನೆಗೆ ಗ್ರಾಮೀಣ ಕ್ಷೇತ್ರವನ್ನೇ ಆಯ್ದುಕೊಂಡರು.
ಕಾರಣ ಹಿಂಬಾಲಕರ ನಂಬುಗೆಯ ಮಾತು ಗ್ರಾಮೀಣ ಮತದಾರ ತಮ್ಮನ್ನು ಕೈಬಿಡಲಿಲ್ಲ ಎಂಬ ನಂಬಿಕೆ ಹೆಚ್ಚಿನದಾಗಿ ಕೌಲ್ ಬಜಾರ್ ನ ಜನತೆಯನ್ನು ನಂಬಿದ್ದು ಅದಕ್ಕಾಗಿ ಅವರು ಸಂಪಾದಿಸಿದ ಬಹುಪಾಲನ್ನು ಅವರಿಗಾಗಿ ನೀಡಿದರೂ ಮತ ಮಾತ್ರ ಶೂನ್ಯವಾಯ್ತು.
ಗ್ರಾಮೀಣವೇ ಸೂಕ್ತ ಎಂಬ ಸುಳ್ಳು ಸರ್ವೆಗಳನ್ನು ನಂಬಿದ್ದು ಮೋಸ ಆಯ್ತು ಉತ್ತಮವಾದ ಸಲಹೆ ನೀಡಬಲ್ಲವರನ್ನು ತಾವು ಉನ್ನತ ನಾಯಕರಾಗಿದ್ದೇವೆಂಬ ಹುಮ್ಮಸ್ಸಿನಿಂದ ದೂರ ಮಾಡಿದ್ದು ಸೋಲಿಗೆ ಹತ್ತು ಹಲವು ಕಾರಣ ಎನ್ನಬಹುದು. ಅಷ್ಟೇ ಅಲ್ಲ ಮುಸ್ಲಿಂರಿಗೆ ಮೀಸಲಾತಿ ತೆಗೆದಿದ್ದು, ಹಿಂದುತ್ವ, ಮೋದಿ ಬಂದು ಹೋಗಿದ್ದನ್ನು ಕೌಲ್ ಬಜಾರ್ ಮತದಾರ ಸಹಿಸಲಿಲ್ಲ. ಇವರ ನಿರೀಕ್ಷೆ ಸುಳ್ಳಾಯ್ತು ಎನ್ನಬಹುದು. ಈಗಲಾದರೂ ಅವರು ತಮ್ಮ ಕೆಲ ನಡುವಳಿಕೆಯನ್ನು ಬದಲಿಸಿಕೊಂಡು ಮೊದಲಿನಂತೆ ಎಲ್ಲರೊಡನೆ ನಗು ನಗುತ್ತಾ ಬೆರೆತರೆ ಈ ಸೋಲು ಮುಂದಿನ ಗೆಲುವಿಗೆ ಮತ್ತೊಂದು ಮೆಟ್ಟಿಲಾಗಬಹುದು.