ಕೂಡ್ಲಿಗಿ: ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ. ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತಿರುತ್ತೇವೆ. 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇಂದು ಸೇವಾ ನಿವೃತ್ತಿ ಹೊಂದುತ್ತಿರುವ ವಿದ್ಯಾರ್ಥಿಸ್ನೇಹಿ ಎಂ ಎಸ್ ಗೋಪಾಲ ನಾಯ್ಕ ಅವರ ನಡೆ-ನುಡಿ ನಮಗೆಲ್ಲರಿಗೂ ಪ್ರೇರಣೆ. ಶಿಕ್ಷಕ ನಿವೃತ್ತಿಯಾಗುವುದು ವೃತ್ತಿಯಿಂದ ಮಾತ್ರ. ಆದರೆ ವಿದ್ಯಾರ್ಥಿಗಳ ಮನಸ್ಸಿಂದಲ್ಲ. ಬದುಕಿನಲ್ಲಿ ಸಮಾಜ ಪಾಠ ಬಹುಮುಖ್ಯವಾದುದು ಎಂದು ಕೃಷ್ಣ ನಾಯ್ಕ್ ಮಾ.ಜಿ.ಪಂ ಉಪಾಧ್ಯಕ್ಷರು ಹೇಳಿದರು.
ತಾಲೂಕಿನ ಕಾನಹೊಸಹಳ್ಳಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಎಂ ಎಸ್ ಗೋಪಾಲ ನಾಯ್ಕ್ ಅವರ ವಯೋ ನಿವೃತ್ತಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಮೌಲ್ಯಯುತ ಶಿಕ್ಷಣ ನೀಡುತ್ತಾ ಶಿಕ್ಷಣ ರಂಗದಲ್ಲಿ ಹಲವಾರು ಚೇತನಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಶಿಕ್ಷಕರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖೀ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕರು ಎಸ್ ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಮಾತನಾಡಿ ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಎಸ್ ಗೋಪಾಲ ನಾಯ್ಕ್ ಮಕ್ಕಳೊಂದಿಗೆ ಕಳೆದ ದಿನಗಳು, ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದಿ ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು. ಇನ್ನು ಕಾರ್ಯಕ್ರಮದ ಸ್ವಾಗತ ರವಿಕುಮಾರ್ ಜಿಎಸ್ ಶಿಕ್ಷಕರು ನೆರವೇರಿಸಿದರು. ಪ್ರಾರ್ಥನೆ ಧರಣಿ ಮತ್ತು ತಂಡದವರಿಂದ ನೆರವೇರಿತು. ಎಂ ಎಸ್ ಗೋಪಾಲ ನಾಯ್ಕ್ ಶಿಕ್ಷಕರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳು ಲಭಿಸಿದ್ದಾವೆ. ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್ ಮಂಜುನಾಥ್, ಚನ್ನಬಸವನಗೌಡ, ವಿಶ್ವನಾಥ್, ಶ್ರೀಕಾಂತ್, ಸಿದ್ದೇಶ್, ನಿವೃತ್ತಿ ಮುಖ್ಯ ಶಿಕ್ಷಕರು ಚಂದ್ರಣ್ಣ, ಭೀಮ ನಾಯ್ಕ್, ಕೃಷ್ಣ ನಾಯ್ಕ್ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರು, ಚಿದಾನಂದಪ್ಪ ನಾಗೇಶ್ ಹೊಸಹಳ್ಳಿ ಸೇರಿದಂತೆ ಮುಖಂಡರು, ಶಾಲೆಯ ಶಿಕ್ಷಕರು, ಶಾಲೆಯ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು, ಸಾರ್ವಜನಿಕರು, ಸಿಬ್ಬಂದಿಗಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.