ಬಳ್ಳಾರಿ : ಮಧುಮೇಹವನ್ನು ಸಂಪೂರ್ಣವಾಗಿ ಹಿಮ್ಮುಖಗೊಳಿಸಬಹುದಾಗಿದ್ದು, ದಿನಕ್ಕೆ 02 ಬಾರಿ ಸರಿಯಾದ ಸಮಯಕ್ಕೆ ಮಿತವಾದ ನಿಯಮಿತ ಆಹಾರ ಸೇವನೆ ಹಾಗು ದಿನಾಲೂ 45 ನಿಮಿಷಗಳÀ ಸರಳ ವ್ಯಾಯಾಮದ ಅವಶ್ಯಕತೆ ಇದೆ ಎಂದು ಡಾ.ಜಗನ್ನಾಥ್ ದೀಕ್ಷಿತ್ ಅವರು ತಿಳಿಸಿದರು.
ಶುಕ್ರವಾರದಂದು, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಭವನದಲ್ಲಿ ಸಮುದಾಯ ವೈದ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮೆಲ್ಲರ ಧ್ಯೇಯ ಮಧುಮೇಹವನ್ನು ತಡೆಗಟ್ಟುವುದು ಹಾಗೂ ಮಧುಮೇಹದಿಂದ ಬಳಲುತ್ತಿರುವವರ ರಕ್ತದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ ಅಂಗಾಗಗಳು ನಾಶವಾಗದಂತೆ ನೋಡಿಕೊಳ್ಳುವುದು ಎಂದರು.
ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರ ಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ದೀಕ್ಷಿತ್ ಅವರ ಜೀವನ ಶೈಲಿ ಬದಲಾವಣೆ ಹಾಗೂ ಮಧುಮೇಹ ಮುಕ್ತ ಭಾರತ ಅಭಿಯಾನ ದೇಶದಲ್ಲೆ ವಿಶಿಷ್ಟವಾದದ್ದು ಹಾಗೂ ಅನುಕರಣೀಯವಾಗಿದೆ. ಇದರಿಂದ ಮಧುಮೇಹ ಚಿಕಿತ್ಸಾ ವಿಧಾನದಲ್ಲೇ ಅಮೂಲಾಗ್ರ ಬದಲಾವಣೆ ಆಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಮ್ಸ್ ನ ಪ್ರಾಂಶುಪಾಲರಾದ ಡಾ.ಕೃಷ್ಣಸ್ವಾಮಿ, ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ.ಕಾಸಾ ಸೋಮಶೇಖರ್, ಉಪ ವೈದ್ಯಕೀಯ ಅಧೀಕ್ಷಕ ಡಾ.ಗಡ್ಡಿ ದಿವಾಕರ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ತಾರಿಹಳ್ಳಿ ಚಂದ್ರಶೇಖರ್, ವೈದ್ಯಶಾಸ್ತ್ರ ವಿಭಾಗದ ಪ್ರಭಾರಿ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ರೆಡ್ಡಿ.ಎಂ., ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಸವರಾಜ್.ಎಸ್ ಉಪಸ್ಥಿತರಿದ್ದರು.
ಸಮುದಾಯ ವೈದ್ಯಶಾಸ್ತ್ರದ ಪ್ರಾಧ್ಯಾಪಕ ಡಾ.ಬೆಲ್ಲರ ರಾಘವೇಂದ್ರ ಸ್ವಾಗತಿಸಿದರು. ಡಾ.ಬಸವರಾಜ್.ಎಸ್ ವಂದಿಸಿದರು. ಸಮುದಾಯ ವೈದ್ಯಶಾಸ್ತ್ರ ವಿಭಾಗದ ಬೋಧಕ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ನರ್ಸಿಂಗ್ ಕಾಲೇಜಿನ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು, ಸರ್ಕಾರಿ ದಂತ ಕಾಲೇಜಿನ ಬೋಧಕ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.