ಬಳ್ಳಾರಿ : ಮುಟ್ಟು ಹೆಣ್ಣುಮಕ್ಕಳಲ್ಲಿ ಕಂಡುಬರುವ ಸಹಜ ಕ್ರಿಯೆಯಾಗಿರುವುದರಿಂದ, ಹೆಣ್ಣು ಮಕ್ಕಳು ಹೆದರಬಾರದು. ಮಾಸಿಕ ನಿರ್ವಹಣೆಗೆ ಆಧುನಿಕತೆಯ ಸುರಕ್ಷಿತ ಕಫ್ ಬಳಕೆಯಿಂದ ಸಧೃಡ ಆರೋಗ್ಯಕ್ಕಾಗಿ ಮುನ್ನಡೆಯೊಣ ನಮ್ಮ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಯುನಿಸೆಫ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ನಜೀರ್‍ಸಾಬ್ ಸಭಾಂಗಣದಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳಿಗೆ ಬುಧವಾರ ಏರ್ಪಡಿಸಿದ್ದ ಸುಸ್ಥಿರ ಮುಟ್ಟಿನ ನಿರ್ವಹಣೆ ಕುರಿತು ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಮುಟ್ಟಿನ ನೈರ್ಮಲ್ಯದ ಮಧ್ಯಸ್ಥಿಕೆಗಳು ಸುಸ್ಥಿರ ಮುಟ್ಟಿನ ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಇದು ಬಳಕೆದಾರರ ಆರೋಗ್ಯ, ನೈರ್ಮಲ್ಯ ಕಾರ್ಮಿಕರ ಸುರಕ್ಷತೆ ಮತ್ತು ಘನತೆ ಹಾಗೂ ಪರಿಸರದ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸುತ್ತದೆ ಎಂದರು.
ಮುಟ್ಟಿನ ಬಗ್ಗೆ ಸುತ್ತಲಿನ ಮೌನ ಮತ್ತು ಕಳಂಕವನ್ನು ಮುರಿಯಲು ಹಾಗೂ ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಏರ್ಪಡಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಯುನಿಸೆಫ್‍ನ ವಿಷಯ ತಜ್ಞೆ ಡಾ.ಮೀನಾಕ್ಷಿ ಭರತ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಮಹಿಳೆಯರು ಅಥವಾ ಹುಡುಗಿಯರು ಪ್ರಸ್ತುತ ಸ್ಥಳೀಯವಾಗಿ ವಾಣಿಜ್ಯಿಕವಾಗಿ ಬಳಸುತ್ತಿರುವ ಬಿಸಾಡಬಹುದಾದ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ಬಳಸುತ್ತಿದ್ದಾರೆ.
ಇದರಿಂದಾಗಿ ಪರಿಸರ ಹಾನಿಯಾಗಲು ಕಾರಣವಾಗುತ್ತದೆ. ಮಹಿಳೆಯರು ಕೇವಲ ಸ್ಯಾನಿಟರಿ ಪ್ಯಾಡ್‍ಗಳನ್ನು ಬಳಸಬಾರದು. ಬದಲಾಗಿ ಮುಟ್ಟಿನ ಕಪ್ ಗಳಂತಹ ಪರ್ಯಾಯ ಆಯ್ಕೆಯೂ ಲಭ್ಯವಿದೆ ಎಂದರು.
ಯುನಿಸೆಫ್‍ನ ವಿಷಯ ತಜ್ಞೆ ಡಾ.ಶಾಂತಾ ತುಮಲ್ ಅವರು ಮಾತನಾಡಿ, ಮುಟ್ಟಿನ ಪ್ರಾರಂಭವು ಹದಿಹರೆಯದವರ ಜೀವನದಲ್ಲಿ ಹೊಸ ಹಂತ ಮತ್ತು ಹೊಸ ದುರ್ಬಲತೆಗಳನ್ನು ಅರ್ಥೈಸುತ್ತದೆ. ಆದರೂ, ಅನೇಕ ಹದಿಹರೆಯದ ಹುಡುಗಿಯರು ಮುಟ್ಟಿನ ಸಮಯದಲ್ಲಿ ಕಳಂಕ, ಕಿರುಕುಳ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತ್ಯಾಜ್ಯದ ಹೊರೆ ಸೇರಿದಂತೆ ವಿವಿಧ ಅಂಶಗಳಲ್ಲಿ ಬಿಸಾಡಬಹುದಾದ ಪ್ಯಾಡ್‍ಗಳು, ಮರುಬಳಕೆ ಮಾಡಬಹುದಾದ ಪ್ಯಾಡ್‍ಗಳು ಮತ್ತು ಮುಟ್ಟಿನ ಕಪ್‍ಗಳು ಸೇರಿದಂತೆ ಮುಟ್ಟಿನ ಉತ್ಪನ್ನಗಳ ಮೇಲೆ ಮೂರು-ಮಾರ್ಗದ ತುಲನಾತ್ಮಕ ವಿಶ್ಲೇಷಣೆಯ ಬಗ್ಗೆ ತಿಳಿಸಿಕೊಟ್ಟರು. ಮುಟ್ಟಿನ ನೈರ್ಮಲ್ಯ ಉತ್ಪನ್ನಗಳು, ಅವುಗಳ ವಿಲೇವಾರಿ ಮತ್ತು ಸೂಕ್ತವಾದ ತ್ಯಾಜ್ಯ ನಿರ್ವಹಣೆ ಕುರಿತು ಮಹಿಳೆಯರು ಮತ್ತು ಹುಡುಗಿಯರು ಅರಿವು ಮತ್ತು ಜಾಗೃತಿ ಹೊಂದಬೇಕು ಎಂದು ಹೇಳಿದರು.
ನಂತರ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳಿಂದ ಸಂವಾದ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗಿರಿಜಾ ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು, ತರಬೇತುದಾರರಾದ ಡಾ.ಶೋಭರಾಣಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಹಾಗೂ ಜಿಲ್ಲಾ ಅರ್‍ಸಿಹೆಚ್ ಅಧಿಕಾರಿ ಡಾ.ಅನೀಲ್ ಕುಮಾರ್, ಯುನಿಸೆಫ್ ಸಮಾಲೋಚಕ ಡಾ.ದಿಲೀಪ್ ಕುಮಾರ್, ಪ್ರಸೂತಿ ಸಂಘದ ಅಧ್ಯಕ್ಷ ಡಾ.ಶಿವಕುಮಾರ್, ಐಎಂಎ ಅಧ್ಯಕ್ಷ ರೇಣುಕಾ ಮಂಜುನಾಥ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕ್ಷೇತ್ರ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.