ಒಟ್ಟು 6,552 ಪ್ರಕರಣಗಳು ರಾಜೀ ಸಂಧಾನ; ಒಟ್ಟು 27,47,55,039.5 ರೂ.ಗಳ ಪರಿಹಾರ
ಬಳ್ಳಾರಿ : ರಾಷ್ಟ್ರೀಯ ಲೋಕ್ ಅದಾಲತ್‍ನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಹೆಚ್.ಪುಷ್ಪಾಂಜಲಿ ದೇವಿ ಅವರ ಮಾರ್ಗದರ್ಶನದಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಯಿತು.
ಶನಿವಾರದಂದು, ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಒಟ್ಟು 31 ಪೀಠಗಳನ್ನು ಸ್ಥಾಪಿಸಲಾಗಿತ್ತು. ಜಿಲ್ಲೆಯ ವಿವಿಧ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ನಾನಾ ರೀತಿಯ ರಾಜೀ ಆಗಬಹುದಾದಂತಹ ಸುಮಾರು 10,843 ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 6,552 ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು ಮತ್ತು ಒಟ್ಟು 27,47,55,039.5 ರೂ.ಗಳ ಮೊತ್ತದ ಪರಿಹಾರ ಒದಗಿಸಲಾಗಿದೆ.
ಜಿಲ್ಲಾ ನ್ಯಾಯಾಲಯ ಆವರಣದಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ನ ಪೀಠದಲ್ಲಿ ಸುಮಾರು 7 ಜೋಡಿ ದಂಪತಿಗಳನ್ನು ಯಶಸ್ವಿಯಾಗಿ ರಾಜೀ ಸಂಧಾನದ ಮೂಲಕ ಒಂದುಗೂಡಿಸಲಾಗಿದೆ.
ಲೋಕ ಅದಾಲತ್‍ನಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಿವಿಧ ವಿಮೆ ಕಂಪನಿಯ ಅಧಿಕಾರಿಗಳು, ವಿಮೆ ಕಂಪನಿಯ ಪ್ಯಾನಲ್ ವಕೀಲರು, ಅರ್ಜಿದಾರರ ಪರ ವಕೀಲರು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಕಕ್ಷಿದಾರರು ಭಾಗವಹಿಸಿ ರಾಷ್ಟ್ರೀಯ ಲೋಕ್ ಅದಾಲತ್‍ನ್ನು ಯಶಸ್ವಿಗೊಳಿಸಿದ್ದಾರೆ. ಕಕ್ಷಿದಾರರು ಹಾಗೂ ವಕೀಲರು ಸೇರಿ ರಾಷ್ಟ್ರೀಯ ಲೋಕ್ ಅದಾಲತ್‍ನ ಬೈಠಕ್‍ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ತಮ್ಮ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ರಾಜಿ ಸಂಧಾನ ಮಾಡಿಕೊಂಡರು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನಿ ಅವರು ತಿಳಿಸಿದ್ದಾರೆ.