ಬಳ್ಳಾರಿ : ಭಾರತದ ಪ್ರಜಾಪ್ರಭುತ್ವದ ಹಬ್ಬ ಎನ್ನಲಾಗುವ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡುತ್ತಿರುವ ಹಿರಿಯ ನಾಗರಿಕರ ಕೊಡುಗೆ ಅಪಾರ, ಹಿರಿಯ ನಾಗರಿಕರಾದ ತಾವು ಮುಂಬರುವ ಚುನಾವಣೆ ಗಳಲ್ಲಿಯೂ ಸಹ ಇದೇ ರೀತಿ ಉತ್ಸಾಹದೊಂದಿಗೆ ಭಾಗವಹಿಸಬೇಕು. ಭಾರತೀಯ ಮತದಾನ ಪ್ರಕ್ರಿಯೆಯಲ್ಲಿ ಸಕರಾತ್ಮಕ ಕೊಡುಗೆ ನೀಡುವುದರ ಮೂಲಕ ಯುವ ಮತದಾರರಿಗೆ ಮಾದರಿಯಾಗಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಯಾಗಿರುವ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
ಭಾರತ ಚುನಾವಣಾ ಆಯೋಗ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಅವರು ಭಾಗವಹಿಸಿ ಹಿರಿಯ ನಾಗರಿಕರನ್ನು ಸನ್ಮಾನಿಸಿ ಮಾತನಾಡಿದರು.
ಹಿರಿಯ ನಾಗರಿಕರಾದ ಮಿಂಚೇರಿ ಗ್ರಾಮದ ಮದರ ಬೀ(95), ಕೊಳಗಲ್ ಗ್ರಾಮದ ತಿಮ್ಮಪ್ಪ(100), ಕೋಟೆ ಪ್ರದೇಶದ ಅಮಿರ್‍ಭಾಷ(92), ನಗರ ನಿವಾಸಿಗಳಾದ ಅಂಜಿನಮ್ಮ(80), ರಾಮಕೃಷ್ಣ (78) ಅವರನ್ನು ಸನ್ಮಾನಿಸಲಾಯಿತು.
ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝಬೇರಾ ಅವರು, ಹಿರಿಯ ನಾಗರಿಕರೊಂದಿಗೆ ಕುಶೋಲಪಹರಿ ನಡೆಸಿ ಅವರ ಆಗಿನ ಊಟದ ಶೈಲಿ, ಕೆಲಸ ಕಾರ್ಯ, ಪ್ರಸ್ತುತ ಕುಟುಂಬದ ಹಿನ್ನಲೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಶಿರಸ್ತೆದಾರ ಸಾದಿಕ್ ಭಾಷ, ಕಂದಾಯ ನಿರೀಕ್ಷಕ ರಾಮಕೃಷ್ಣ, ಚುನಾವಣೆ ವಿಷಯ ನಿರ್ವಾಹಕ ಲೊಕೇಶ್ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳಾದ ನರೀನ್, ಸುರೇಶ್, ಉಮೇಶ್, ಕಲ್ಲಶೆಟ್ಟಿ, ಸರಸ್ವತಿ ಹಾಗೂ ಇತರರು ಹಾಜರಿದ್ದರು.