ಬೆಂಗಳೂರು: ‘ಇಂಡಿಯಾ’ ಒಕ್ಕೂಟದ ಪ್ರಹಾರದಿಂದ ಕಂಗಾಲಾಗಿರುವ ಪ್ರಧಾನಿ ನರೇಂದ್ರ ಮೋದಿ ಇ.ಡಿ, ಸಿಬಿಐ, ಐಟಿ ದಾಳಿಯ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಸಾಕ್ಷ್ಯಾಧಾರಗಳಿಲ್ಲದೆ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿರುವುದು ಅಕ್ಷಮ್ಯ. ಇದು ಪ್ರಜಾಪ್ರಭುತ್ವದ ಕಗ್ಗೋಲೆ. ಸಂವಿಧಾನ ವಿರೋಧಿ ನಡೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಬಕಾರಿ ನೀತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿ ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಮುಂಬರುವ ಐದು ವಿಧಾನಸಭೆ ಚುನಾವಣೆಗಳು ಸೇರಿದಂತೆ 2024ರ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿ ಶುರುವಾಗಿದೆ. ಅದಕ್ಕಾಗಿಯೇ ಸರ್ವಾಧಿಕಾರದ ಅಮಲಿನಲ್ಲಿ ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅವರು ಎಷ್ಟೇ ದಾಳಿ ನಡೆಸಿದರೂ ನಾವು ಹೆದರುವುದಿಲ್ಲ. ಭೀತಿ ಎಂಬುದು ಕೇವಲ ತಪ್ಪಿತಸ್ಥರ ಎದೆಯಲ್ಲಿರುತ್ತದೆ. ನಮ್ಮ ಎದೆಯಲ್ಲಿ ಹೋರಾಟದ ಕಿಚ್ಚಿದೆ ಎಂದರು.
ಅರವಿಂದ ಕೇಜ್ರಿವಾಲ್ ಅವರನ್ನು ನಿಯಂತ್ರಿಸಲು ಮೋದಿ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ತಿರುಗೇಟು ಎಂಬಂತೆ ಪಂಜಾಬ್‌ನಲ್ಲೂ ಸ್ವತಂತ್ರ ಸರ್ಕಾರ ರಚಿಸಿದ್ದೇವೆ. ಇದೀಗ ದೇಶಾದ್ಯಂತ ಎಎಪಿ ಪರ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ಸೇರ್ಪಡೆಯಿಂದ ಇಂಡಿಯಾ ಒಕ್ಕೂಟವೂ ಬಲಿಷ್ಠವಾಗಿದೆ. ಎನ್‌ಡಿಎ ಬಲದಿಂದ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ನಮ್ಮ ಮಿತ್ರಪಕ್ಷಗಳಿರುವ ರಾಜ್ಯಗಳಲ್ಲಿ ಜಾತಿ ಗಣತಿ ಬಿಡುಗಡೆಯಾಗುತ್ತಿದೆ. ಇದು ಮೋದಿ ಸರ್ಕಾರಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದರು.
ನಡೆದಿದೆ ಎನ್ನಲಾಗುತ್ತಿರುವ ಅಬಕಾರಿ ಹಗರಣದ ತನಿಖೆಯನ್ನು ಸುಮಾರು 15 ತಿಂಗಳಿಂದ ನಡೆಸಲಾಗುತ್ತಿದೆ. ನೂರಾರು ಅಧಿಕಾರಿಗಳು ಹಗಲು ರಾತ್ರಿ ಶೋಧ ನಡೆಸುತ್ತಿದ್ದಾರೆ. ಸುಮಾರು 1 ಸಾವಿರ ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಮುಖಂಡರಾದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಕಸ್ಟಡಿಯಲ್ಲಿಟ್ಟು ಕಿರುಕುಳ ನೀಡಿದ್ದಾರೆ. ಸಲ್ಲದ ಆರೋಪಗಳನ್ನು ಮಾಡಿ ಹಿಂಸಿಸಿದ್ದಾರೆ. ಆದರೆ ಇದುವರೆಗೆ ಒಂದೇ ಒಂದು ಪೈಸೆ ಭ್ರಷ್ಟಾಚಾರದ ಹಣವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಂಜಯ್ ಸಿಂಗ್ ಅವರ ನಿವಾಸದಲ್ಲೂ ಒಂದು ರೂಪಾಯಿ ಸಿಕ್ಕಿಲ್ಲ. ನಡೆದಿರದ ಭ್ರಷ್ಟಾಚಾರವನ್ನು ನಡೆದಿದೆ ಎಂದು ಆರೋಪ ಹೊರಿಸಿ ಎಷ್ಟು ಹುಡುಕಿದರೆ ಏನು ಪ್ರಯೋಜನ? ಇದೀಗ ಮೋದಿ ಹೀನಾಯ ಸೋಲು ಅನುಭವಿಸುವುದು ಗ್ಯಾರಂಟಿ ಎಂಬಂತಾಗಿದೆ. ಹಾಗಾಗಿ ವಿರೋಧ ಪಕ್ಷಗಳ ನಾಯಕರಿಗೆ ಇಲ್ಲಸಲ್ಲದ ಕಿರುಕುಳ ಕೊಟ್ಟಾದರೂ ಮುಂಬರುವ ಚುನಾವಣೆಯಲ್ಲಿ ಅಧಿಕಾರ ಹಿಡಿಯಬಹುದೇನೋ ಎಂಬ ಪ್ರಯತ್ನದಲ್ಲಿದ್ದಾರೆ. ಇದು ಮೋದಿ ಅವರ ಅಸಹಾಯಕತೆ, ಭೀತಿಯನ್ನು ತೋರಿಸುತ್ತದೆ ಎಂದು ಮು.ಚಂದ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ, ನಿರ್ಭೀತಿಯಿಂದ ಸಾರ್ವಜನಿಕರ ಪರವಾಗಿ ಪ್ರಶ್ನೆಗಳನ್ನು ಕೇಳುವ ಭಾರತದ ಖ್ಯಾತ ಪತ್ರಕರ್ತರ ಮನೆಗಳ ಮೇಲೆ ನಿನ್ನೆ ದಾಳಿ ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಅವರ ಫೋನ್, ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ವಿಚಾರಣೆ ನಡೆಸಲಾಗಿದೆ. ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನ ನಡೆದಿದೆ. ನಿನ್ನೆ ಸಂಜೆ ಟಿಎಂಸಿ ಸಂಸದರು ಕೃಷಿ ಭವನಕ್ಕೆ ಹೋದಾಗ, ಕೃಷಿ ಸಚಿವರನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ರೈತರ ಧ್ವನಿ ಎತ್ತಲು ಪ್ರಯತ್ನಿಸಿದಾಗ, ಅವರನ್ನು ಪೊಲೀಸರು ಕೃಷಿ ಭವನದಿಂದ ಹೇಗೆ ಎಳೆದೊಯ್ದರು ಮತ್ತು ಇಂದು 40 ಸ್ಥಳದಲ್ಲಿ ವಿರೋಧ ಪಕ್ಷಗಳ ನಾಯಕರುಗಳ ಸ್ಥಳಗಳ ಮೇಲೆ ದಾಳಿಯಾಗಿರುವುದನ್ನು ನೋಡಿದರೆ ಇವೆಲ್ಲವೂ ಮೋದಿ ಸರ್ಕಾರದ ಪತನದ ಮುನ್ನುಡಿಯಾಗಿದೆ ಎಂದರು.