18.3 C
New York
Wednesday, November 6, 2024

ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣ; ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ : ಸಚಿವ ಸಂತೋಷ್ ಲಾಡ್

ಬಳ್ಳಾರಿ : ಜಿಲ್ಲೆಯಲ್ಲಿ ಬಹುದಿನದ ಬೇಡಿಕೆಯಾದ ಕಾರ್ಮಿಕರ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಮಾಹಿತಿ ನೀಡಿದರು.

ಅವರು, ಭಾನುವಾರದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಮಾತನಾಡಿದರು.

ಕಾರ್ಮಿಕರ ಕಾಯ್ದೆ, ಕಾನೂನಿನನ್ವಯ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಹಿತರಕ್ಷಣೆಗೆ ಸರ್ಕಾರವು ಬದ್ಧವಾಗಿದೆ ಎಂದು ನುಡಿದರು.

ಬಾಲ ಕಾರ್ಮಿಕ ಪದ್ಧತಿಯು ಜಾಸ್ತಿಯಾಗುತ್ತಿದ್ದು, ಇದರ ನಿರ್ಮೂಲನೆಗೆ ವಿವಿಧ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳ ಮತ್ತು ಮಾಧ್ಯಮದ ಮೂಲಕ ಹೆಚ್ಚೆಚ್ಚು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಬಾಲ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಸ್ಥಳಗಳನ್ನು ಗುರುತಿಸಿ ಕಾರ್ಯಾಚರಣೆ ನಡೆಸುವ ಮೂಲಕ ಮಕ್ಕಳನ್ನು ರಕ್ಷಣೆ ಮಾಡಿ, ಅವರನ್ನು ಶೈಕ್ಷಣಿಕವಾಗಿ ಮುನ್ನೆಲೆಗೆ ತರಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಾಲಕಾರ್ಮಿಕ ಪದ್ಧತಿಯು ಸಾಮಾಜಿಕ ಪಿಡುಗಾಗಿದೆ. ಓದುವ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ. ಇದರ ವಿರುದ್ಧ ನಿರಂತರವಾದ ಕಾರ್ಯಾಚರಣೆ ನಡೆಯಬೇಕು. ಬಾಲಕಾರ್ಮಿಕರನ್ನು ಗುರುತಿಸುವ ಸಲುವಾಗಿ ಅಸ್ತಿತ್ವದಲ್ಲಿರುವ ವಿಶೇಷ ಕಾರ್ಯಪಡೆಗಳನ್ನು ಸಕ್ರಿಯಗೊಳಿಸಬೇಕು ಎಂದು ಸೂಚಿಸಿದರು.

ಕಾರ್ಖಾನೆಗಳಲ್ಲಿ ಕಾರ್ಮಿಕರ ಕಾಯ್ದೆ ಕಾನೂನಿನನ್ವಯ ಇರುವ ನಿಯಮಾವಳಿಗಳನ್ನು ಫಲಕಗಳಲ್ಲಿ ಪ್ರದರ್ಶಿಸಬೇಕು ಎಂದು ಸೂಚಿದ ಸಚಿವರು, ಮೂರು ತಿಂಗಳಿಗೊಮ್ಮೆ ಕಾರ್ಮಿಕರಿಗೆ ನೀಡುವ ಸೌಲಭ್ಯಗಳ ಕುರಿತು, ಖುದ್ದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ತಿಂಗಳಿಗೆ ನಿಯಮಾನುಸಾರ ನೀಡುವ ವೇತನ ಪಾವತಿ, ಪಿಎಫ್, ಇಎಸ್ಐ ಸೌಲಭ್ಯಗಳ ಮಾಹಿತಿಯನ್ನು ತಪ್ಪದೇ ಅವರಿಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಕಾರ್ಮಿಕರು ಅಲೆದಾಡುವಂತಾಗಿದೆ. ಹಾಗಾಗಿ ಇಲಾಖಾ ಹಂತದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಬೇಕು. ಅನಗತ್ಯವಾಗಿ ಅಲೆದಾಡಿಸುವಂತಿಲ್ಲ ಎಂದರು.

ಸಿರುಗುಪ್ಪ ತಾಲ್ಲೂಕಿನಲ್ಲಿ 11 ರೈಸ್ ಮಿಲ್ ಗಳಿವೆ, ಇಲ್ಲಿ ಸಾಕಷ್ಟು ಕೂಲಿ ಕಾರ್ಮಿಕರು ಸಂಖ್ಯೆ ಇದ್ದು, ಅವರ ಆರೋಗ್ಯ ರಕ್ಷಣೆಗೆ ಈ ಭಾಗದಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಿಸಬೇಕು ಎಂದು ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಸಚಿವರು, ಕಾನೂನಿನನ್ವಯ ಸರ್ಕಾರ ಗಮನ ಸೆಳೆಯಲಾಗುವುದು ಎಂದರು. ಸಭೆಯಲ್ಲಿ ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಕಾರ್ಮಿಕ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles