ಬಳ್ಳಾರಿ : ಕರ್ನಾಟಕ ಜನಸೈನ್ಯದ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ೬೮ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಸೆಂಟನರಿ ಹಾಲ್‌ನಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯುವ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ. ನಾಗೇಂದ್ರ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ ಮತ್ತು ಗಡಿ, ಜಲ ವಿಚಾರಗಳಲ್ಲಿ ಕರ್ನಾಟಕ ಸರ್ಕಾರ ಬದ್ಧವಾಗಿದೆ, ಕನ್ನಡ ವಿಚಾರ ಬಂದ ಸಂದರ್ಭದಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದರು.
ಈ ಸಂದರ್ಭದಲ್ಲಿ ತಮ್ಮ ಬಾಲ್ಯದಲ್ಲಿ ಮುನಿಸಿಪಲ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಸಮಯದಲ್ಲಿ ಇದೇ ಸೆಂಟನರಿ ಹಾಲ್‌ನಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ, ತಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ ವಿಚಾರಗಳನ್ನು ನೆನಪಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್‌ರೆಡ್ಡಿ ಅವರು ಮಾತನಾಡುತ್ತಾ, ಕನ್ನಡ ಭಾಷೆ, ನೆಲಗಳ ವಿಚಾರ ಬಂದ ಸಂದರ್ಭದಲ್ಲಿ ರಾಜೀಯಾಗುವುದಿಲ್ಲ, ನಗರದಲ್ಲಿನ ಎಲ್ಲಾ ವ್ಯಾಪಾರ ವಹಿವಾಟುಗಳಿಗೆ ಇರುವ ನಾಮಫಲಕಗಳಲ್ಲಿ ಶೇಕಡಾ ೭೦ರಷ್ಟು ಕನ್ನಡ ಭಾಷೆ ಇರುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಇದನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರಲಿದ್ದೇವೆ ಎಂದರು.
ಬೆಳಗಾವಿ ವಿಷಯದಲ್ಲಿ ಯಾರೂ ಕೂಡಾ ಕನ್ನಡಕ್ಕೆ ಧಕ್ಕೆಯಾದಾಗ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಳ್ಳಾರಿ ಗಡಿಭಾಗದಲ್ಲಿ ಕನ್ನಡ ಭಾಷೆ ಇನ್ನೂ ಜೀವಂತವಾಗಿರುವುದಕ್ಕೆ ಕಾರಣ ಕನ್ನಡಪರ ಸಂಘಟನೆಗಳ ಬಹುದೊಡ್ಡ ಕೃಷಿ ಇದ್ದು, ಭಾಷೆಯನ್ನು ಉಳಿಸುವುದಕ್ಕೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವುದು ಅತಿ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಕನ್ನಡ ಏಕೀಕರಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹನೀಯರನ್ನು ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜನಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಎರ‍್ರಿಸ್ವಾಮಿ ಅವರು ವಹಿಸಿದ್ದರು.
ಕಾರ್ಯಕ್ರಮದ ಸಾನಿಧ್ಯವನ್ನು ಕಮ್ಮರಚೇಡು ಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಕಲ್ಯಾಣ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರಾದ ಕೇಶವಮೂರ್ತಿ .ಪಿ, ಸಮಾಜ ಸೇವಕರು ಮತ್ತು ಕಾಂಗ್ರೆಸ್ ಮುಖಂಡರಾದ
ಪಿ.ಜಗನ್ನಾಥ್, ಪಾಲಿಕೆ ಸದಸ್ಯರಾದ ಮುಲ್ಲಂಗಿ ನಂದೀಶ್, ರಾಮಾಂಜಿನಿ, ಬ್ರೂಸ್‌ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೀರಾಸಾಬ್, ಬಿ.ಸಿ.ಶಿವಲಿಂಗಯ್ಯ, ಬಿ.ಹೊನ್ನೂರಪ್ಪ, ಚೆಂಚಯ್ಯ, ಫಯಾಜ್ ಭಾಷ, ನಾಸೀರ್, ಸೊಹೈಲ್, ಹಸೇನ್, ಲಕ್ಷ್ಮೀ ನಾರಾಯಣಶೆಟ್ಟಿ, ಹೊನ್ನೂರಸ್ವಾಮಿ ಸೇರಿದಂತೆ ಹಲವಾರು ಕಾರ್ಯಕರ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಎಸ್.ಕೆ.ಆರ್.ಜಿಲಾನಿಭಾಷ, ಇಂದ್ರಾಣಿ, ಶ್ರೀಜಾರೆಡ್ಡಿ, ಕೆ.ಸಿ.ಸುಂಕಣ್ಣ (ಅಭಿಷೇಕ್), ಪವನ್ ಮತ್ತು ರವಿ, ಹೇಮಾವತಿ, ಸುಮಾರೆಡ್ಡಿ, ಪ್ರತಿಮಾ, ವಿನೋದ್ ಇವರುಗಳಿಗೆ ಕಲಾಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಲಾಯಿತು. ಕಾರ್ಯಕ್ರಮದಲ್ಲಿ ಹೆಸರಾಂತ ಕಲಾವಿದರಿಂದ ನೃತ್ಯ ಕಾರ್ಯಕ್ರಮಗಳು ನೆರೆದಿದ್ದ ಸಾವಿರಾರು ಜನರ ಮನಸೂರೆಗೊಂಡವು.