ಬಳ್ಳಾರಿ : ಈ ಬಾರಿಯ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಯಾರೂ ಆತಂಕ ಪಡಬಾರದು. ಸರ್ಕಾರ ಮತ್ತು ಜಿಲ್ಲಾಡಳಿತ ನಿಮ್ಮ ಜತೆಗಿದೆ ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ಶುಕ್ರವಾರದಂದು, ಜಿಲ್ಲೆಯ ಸಿರುಗುಪ್ಪ ತಾಲ್ಲೂಕು ವ್ಯಾಪ್ತಿಯ ರಾರಾವಿ, ಅಗಸನೂರು, ಬೊಮ್ಮಲಾಪುರ, ಕೊತ್ತಲಚಿಂತೆ, ಮಿಟ್ಟೆ ಸುಗೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬರ ಪರಿಸ್ಥಿತಿ ಅವಲೋಕನೆ ಮಾಡಿ, ರೈತರಿಗೆ ಸಾಂತ್ವನ ಹೇಳಿದರು.
ರಾರಾವಿ ಗ್ರಾಮದ ರೈತ ಮಂಜಪ್ಪನ ಹತ್ತಿ ಹೊಲ, ಕೊರವರ ಮಾರೆಪ್ಪನ ಮೆಣಸಿನಕಾಯಿ ಹೊಲಕ್ಕೆ ಭೇಟಿ ನೀಡಿ, ಬೆಳೆ ಪರೀಕ್ಷಿಸಿದರು. ಅದೇ ರೀತಿಯಾಗಿ ಅಗಸನೂರು ಗ್ರಾಮದ ರೈತ ಹುಸೇನಿಯ ಮೆಣಸಿನಕಾಯಿ ಬೆಳೆ, ಮಿಟ್ಟೆ ಸುಗೂರಿನ ಹನುಮಂತ, ಬೊಮ್ಮಲಾಪುರ ಗ್ರಾಮದ ಮಣಿಯಪ್ಪ ರೈತರ ಮೆಣಸಿನಕಾಯಿ ಬೆಳೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರು ಯಾರೂ ಧೃತಿಗೆಡಬಾರದು, ಸಮೀಕ್ಷೆ ಅನುಸಾರ ಬರ ಪರಿಹಾರ ಒದಗಿಸಲು ರಾಜ್ಯ ಸರ್ಕಾರವು ರೈತರ ಬೆನ್ನೆಲುಬಾಗಿ ನಿಂತಿದೆ. ಯಾರೂ ಆತಂಕ ಪಡಬಾರದು ಎಂದು ಸಚಿವ ಬಿ.ನಾಗೇಂದ್ರ ಅವರು ರೈತರಿಗೆ ಮನವರಿಕೆ ಮಾಡಿದರು.
“ಸಿರುಗುಪ್ಪ ತಾಲ್ಲೂಕು ಭಾಗದ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 2,300 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನ ಕಾಯಿ, ಹತ್ತಿ ಬೆಳೆ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ಒಣಗಿದೆ, ಅಲ್ಲಲ್ಲಿ ಬೆಳೆ ರೋಗ ಅಂಟಿದೆ. ಈಗಾಗಲೇ ಎನ್.ಡಿ.ಆರ್.ಎಫ್ ತಂಡವು ಭೇಟಿ ನೀಡಿದ್ದು, ಸಮೀಕ್ಷೆ ನಡೆಸಿದ್ದಾರೆ” ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ಸಚಿವರಿಗೆ ಗಮನಕ್ಕೆ ತಂದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು, ಅಲ್ಲಿನ ನಾಗರಿಕರ ಜೊತೆ ಕುಶಲೋಪರಿ ನಡೆಸಿ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಚಾರಿಸಿದರು. ಕುಡಿಯುವ ನೀರು ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಜಿಪಂ ಸಿಇಒ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಿರುಗುಪ್ಪ ತಾಲ್ಲೂಕು ತಹಶೀಲ್ದಾರ ವಿಶ್ವನಾಥ, ತಾಪಂ ಇಒ ಪವನ್ ಕುಮಾರ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರು ಹಾಜರಿದ್ದರು.
ಬರ ಅಧ್ಯಯನ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ:
ಮುಖ್ಯ ಮಂತ್ರಿಗಳ ನಿರ್ದೇಶನದಂತೆ, ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಅವಲೋಕಿಸಿ, ಇದೇ ತಿಂಗಳ ನ.15 ರೊಳಗಾಗಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಯುವಜನ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹೇಳಿದರು.
ಶುಕ್ರವಾರ, ಸಿರುಗುಪ್ಪ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆ ನಡೆಸಿ, ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಸಮಸ್ಯೆ ಎದುರಾದಲ್ಲಿ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು. ಜಾನುವಾರುಗಳಿಗೆ ಮೇವಿನ ದಾಸ್ತಾನು ಸಂಗ್ರಹಣೆ ಇಟ್ಟುಕೊಳ್ಳಬೇಕು ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಬರ ನಿರ್ವಹಣೆಯನ್ನು ಕೈಗೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರವು ಬರ ಎದುರಿಸಲು ಸನ್ನದ್ಧವಾಗಿದೆ ಎಂದು ನುಡಿದರು.
ಪತ್ರಿಕಾಗೋಷ್ಠಿ:
ಜಿಲ್ಲೆಯಲ್ಲಿ 4,43,000 ಹೆಕ್ಟೇರ್ ಭೂಮಿ ಸಾಗುವಳಿ ಕ್ಷೇತ್ರವಾಗಿದ್ದು, ಈ ವರ್ಷದ ಮಂಗಾರು ಮಳೆ ಅಭಾವದಿಂದ ಕೇವಲ 2,78,227 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 573 ಮಿ.ಮೀ ವಾಡಿಕೆ ಮಳೆಯಾಗಿದ್ದು, ಕೇವಲ 261 ಮೀ.ಮೀ ಪ್ರಮಾಣದಷ್ಟು ಮಳೆಯಾಗಿದೆ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಗೆ ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡವು ಸಮೀಕ್ಷೆ ನಡೆಸಿದೆ. ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯದಂತೆ 1 ಹೆಕ್ಟೇರ್ ಪ್ರದೇಶದ ಖುಷ್ಕಿ ಬೆಳೆಗೆ ರೂ.8,500 ಪರಿಹಾರ, 1 ಹೆಕ್ಟೇರ್ ಪ್ರದೇಶದ ನೀರಾವರಿ ಬೆಳೆಗೆ ರೂ.17,000 ಪರಿಹಾರ, 1 ಹೆಕ್ಟೇರ್ ಪ್ರದೇಶದ ಬಹುವಾರ್ಷಿಕ ಬೆಳೆಗೆ ರೂ. 22,000 (ತೋಟಗಾರಿಕೆ ಬೆಳೆಗಳಿಗೆ) ಪರಿಹಾರ ನಿಗದಿಪಡಿಸಿದೆ ಎಂದು ವಿವರಿಸಿದರು.
ಸಿರುಗುಪ್ಪ ತಾಲ್ಲೂಕಿನಲ್ಲಿ ನಿನ್ನೆ ಸುರಿದ ಅಕಾಲಿಕ ಮಳೆಯಿಂದಾಗಿ, ಭತ್ತದ ಬೆಳೆ ನೆಲಕ್ಕುರುಳಿದೆ, ಇದಕ್ಕೂ ಪರಿಹಾರ ಒದಗಿಸಲು ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಕೃಷಿ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ, ತಹಶೀಲ್ದಾರ ವಿಶ್ವನಾಥ, ತಾಪಂ ಇಒ ಪವನ್ ಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಇಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಿರುಗುಪ್ಪ ಮತ್ತು ಕುರುಗೋಡು ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಬರ ಅಧ್ಯಯನ ವೀಕ್ಷಣೆ ನಡೆಸಿದ ಸಚಿವರು, ನಾಳೆ ಬಳ್ಳಾರಿ ತಾಲ್ಲೂಕು ಮತ್ತು ಸಂಡೂರು ತಾಲೂಕಿನಲ್ಲಿ ಬರ ವೀಕ್ಷಣೆ ನಡೆಸುವರು.