ಮುಂದುವರೆದ ಅತಿಥಿ ಉಪನ್ಯಾಸಕರ ಪ್ರತಿಭಟನೆ
ವಿಜಯನಗರ(ಹೊಸಪೇಟೆ), ನ.27: ನಗರದ ಶ್ರೀ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಐದನೇ ದಿನವೂ ತಮ್ಮ ಪ್ರತಿಭಟನೆಯನ್ನು ನಡೆಯಿತು.
ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಎಐಡಿವೈಒ ಸಂಘಟನೆ ಬೆಂಬಲ ಸೂಚಿಸಿದರು.
ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸೇವಾ ಭದ್ರತೆಗಾಗಿ ಮತ್ತು ವರ್ಷದ 12 ತಿಂಗಳು ಸಂಬಳಕ್ಕಾಗಿ ಅನಿರ್ಧಿಷ್ಟಾವಧಿ ಹೋರಾಟವನ್ನು ಐದನೇ ದಿನವಾದ ಸೋಮವಾರ ಸಹ ಮುಂದುವರಿಸಿದರು.
ಇದರ ಅಂಗವಾಗಿ ಹೊಸಪೇಟೆ ನಗರದ ಶ್ರೀ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ತಮ್ಮ ಧರಣಿ ಕುಳಿತಿದ್ದರು.
ಈ ಹೋರಾಟಕ್ಕೆ ಎಐಡಿವೈಓ ಬೆಂಬಲ ಸೂಚಿಸಿದ್ದು ಸಂಘಟನೆಯ
ಪ್ರಶಾಂತ್ ಬಡಿಗೇರ್ ಮತ್ತು ನಿಹಾರಿಕ ಮಾತನಾಡಿ, ಅತಿಥಿ ಉಪನ್ಯಾಸಕರಿಗೆ ಸರ್ಕಾರ ಮೊದಲಿನಿಂದಲೂ ತಾರತಮ್ಯ ನೀತಿ ಅನುಸರಿಸುತ್ತಿದೆ, ಕಾಯಂ ಅಧ್ಯಾಪಕರಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದರೂ ಸಹ ಅತಿಥಿ ಉಪನ್ಯಾಸಕರಿಗೆ ಸರಿಯಾದ ಸಂಬಳ ಸವಲತ್ತುಗಳು ಸಿಗುತ್ತಿಲ್ಲ ಅವರ ಬೇಡಿಕೆಗಳನ್ನು ಸರ್ಕಾರವು ಶೀಘ್ರವೇ ಈಡೇರಿಸಬೇಕೆಂದು ಮತ್ತು ತಮ್ಮ ಸಂಘಟನೆಯ ಬೆಂಬಲವು ಸದಾ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಇರಲಿದೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರ ಸಂಘದ ವಿಜಯನಗರ
ಜಿಲ್ಲಾಧ್ಯಕ್ಷರಾದ ಗುಜ್ಜಲ ಹುಲುಗಪ್ಪ ಮಾತನಾಡಿ, ಕಳೆದ 15 ವರ್ಷಗಳಿಂದಲೂ ಅತಿಥಿ ಉಪನ್ಯಾಸಗಳು ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ ಆದರೆ ಸರ್ಕಾರವು ನಮ್ಮ ಬೇಡಿಕೆಗಳನ್ನು ಕಡೆಗಣಿಸುತ್ತಾ ಬಂದಿದೆ,ಬೇರೆ ಇಲಾಖೆಗಳಲ್ಲಿ ಗುತ್ತಿಗೆ ಆಧಾರಿತ ನೌಕರರನ್ನು ಖಾಯಂಗೊಳಿಸಿದಂತೆ ನಮ್ಮನ್ನು ಸಹ ಖಾಯಂಗೊಳಿಸಲು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಮತ್ತು ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಬೂದೂರು ಷಣ್ಮುಖಪ್ಪ, ಅತಿಥಿ ಉಪನ್ಯಾಸಕರಾದ ದೊಡ್ಡ ಉಜ್ಜಪ್ಪ, ಮುರಳೀಧರ ಬಿ.ಕೆ, ಅಯ್ಯಾಳಿ ಯರಿಸ್ವಾಮಿ, ಕುಸುಮ ಸೇರಿದಂತೆ ಮತ್ತಿತರು ಇದ್ದರು.