ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ : ಜಿಲ್ಲೆಯ ಎಲ್ಲಾ ತಾಲ್ಲೂಕಗಳ ಅತಿಥಿ ಉಪನ್ಯಾಸಕರ ರ್ಯಾಲಿ
ವಿಜಯನಗರ : ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿ ಮತ್ತು
ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಹೊಸಪೇಟೆಯಲ್ಲಿ ಡಿ.4ರಂದು(ಇಂದು) ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದ್ದೇವೆಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಗುಜ್ಜಲ ಹುಲುಗಪ್ಪ ತಿಳಿಸಿದರು.
ನಗರದ ತಾಲೂಕು ಕಚೇರಿಯ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ವಿಜಯನಗರ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನವಂಬರ್ 23ರಿಂದ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ, ನಮ್ಮನ್ನು ಆಧುನಿಕ ಜೀತ ಪದ್ಧತಿಯಂತೆ ದುಡಿಸಿಕೊಂಡು ಸರಿಯಾದ ವೇತನ, ಭದ್ರತೆ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಮತ್ತು ಅನೇಕ ಅತಿಥಿ ಉಪನ್ಯಾಸಕರು ನಿವೃತ್ತಿ ಅಂಚಿನಲ್ಲಿ ಇದ್ದು ಯಾವುದೇ ಸವಲತ್ತುಗಳನ್ನು ಪಡೆಯದೆ ವಂಚಿತರಾಗುತ್ತಿದ್ದಾರೆಂದು ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಹಗರಿಬೊಮ್ಮನಹಳ್ಳಿ ಅತಿಥಿ ಉಪನ್ಯಾಸಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಎಮ್ ಶಿವಮೂರ್ತಿ ಮಾತನಾಡಿ, ಎಲ್ಲಾ ಸರ್ಕಾರಿ ಕಾಲೇಜುಗಳು ಅವಲಂಬಿತರಾಗಿರುವುದು ಅತಿಥಿ ಉಪನ್ಯಾಸಕರ ಮೇಲೆಯೇ ಮುಷ್ಕರದಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಆದರೂ ಸಹ ಸರ್ಕಾರವು ಯಾವುದೇ ರೀತಿಯ ಸ್ಪಂದನೆ ಮಾಡುತ್ತಿಲ್ಲ ಮತ್ತು ಇದೇ ರೀತಿ ಮುಂದುವರೆದರೆ ಡಿಸೆಂಬರ್ 7ರಂದು ಇಡೀ ರಾಜ್ಯದ ಅತಿಥಿ ಉಪನ್ಯಾಸಕರು ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಕಿ ಮಲ್ಲಿಕಾರ್ಜುನ, ಹೊಸಪೇಟೆ ತಾಲ್ಲೂಕು ಅಧ್ಯಕ್ಷರಾದ ಷಣ್ಮುಖಪ್ಪ, ಖಜಾಂಚಿಗಳಾದ ಅಯ್ಯಾಳಿ ಯರಿಸ್ವಾಮಿ, ಸದಸ್ಯರಾದ ಬಿ ವಿ ನಾಗವೇಣಿ, ಗಿರಿಜಾ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.