ಬಳ್ಳಾರಿ : ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣೆ ಸಂಸ್ಥೆಯ ಬಳ್ಳಾರಿ ಸಂಶೋಧನಾ ಕೇಂದ್ರದ ನೂತನ ಮುಖ್ಯಸ್ಥರಾಗಿ ಡಾ.ಬಿ.ಕೆ.ರಾವ್ ಅವರು ಆಯ್ಕೆಯಾಗಿದ್ದು, ಗುರುವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಡಾ.ರಾವ್ ಅವರು ಐಸಿಎಆರ್- ಒಣಭೂಮಿ ಕೃಷಿ ಸಂಶೋಧನಾ ಸಂಸ್ಥೆ ಹೈದರಾಬಾದ್‍ನಲ್ಲಿ ಪ್ರಧಾನ ವಿಜ್ಞಾನಿಗಳಾಗಿ ಮತ್ತು ನೀರು, ಭೂಮಿ ನಿರ್ವಹಣೆ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ವಾಲಂತಾರಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಡಾ.ರಾವ್ ಅವರು ವೃತ್ತಿ ಜೀವನದಲ್ಲಿ ವ್ಯಾಪಕವಾದ ಸಂಶೋಧನೆ, ತರಬೇತಿ ಮತ್ತು ವಿಸ್ತರಣೆಯ ಅನುಭವ ಹೊಂದಿ ಪ್ರಸಿದ್ಧರಾಗಿದ್ದಾರೆ. ಅವರು ವಿವಿಧ ಸ್ಥಳಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡಿ, ಅನೇಕ ಅನುದಾನಿತ ಯೋಜನೆಗಳನ್ನು ಮುನ್ನಡೆಸಿದ್ದಾರೆ.
ಕೇಂದ್ರದ ಹಂಗಾಮಿ ಮುಖ್ಯಸ್ಥೆ ಡಾ.ಪ್ರಭಾವತಿ ಹಾಗೂ ಸಿಬ್ಬಂದಿಯವರು ನೂತನ ಮುಖ್ಯಸ್ಥರನ್ನು ಸ್ವಾಗತಿಸಿದರು.
ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಾದಾತ್ಮಕ ಸಭೆಯಲ್ಲಿ ಡಾ.ರಾವ್ ಅವರು ವಿವಿಧ ಐಸಿಎಆರ್-ಸಂಸ್ಥೆಗಳಲ್ಲಿ ತಮ್ಮ ಕೆಲಸದ ಅನುಭವವನ್ನು ಹಂಚಿಕೊಂಡು ಮತನಾಡಿದ ಅವರು, ಕೇಂದ್ರದ ಪ್ರತಿ ವಿಜ್ಞಾನಿಗಳು ಕನಿಷ್ಠ ಒಂದು ಬಾಹ್ಯ ಅನುದಾನಿತ ಯೋಜನೆಯನ್ನು ಹೊಂದಿರಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಭಾರತೀಯ ಕೃಷಿಯಲ್ಲಿ ಕಪ್ಪು ಮಣ್ಣಿನ ಮಹತ್ವ ಮತ್ತು ಕಳೆದ ಎಪ್ಪತ್ತು ವರ್ಷಗಳಿಂದ ಕಪ್ಪು ಮಣ್ಣಿನಲ್ಲಿ ಕೆಲಸ ಮಾಡುತ್ತಿರುವ ಮತ್ತು ಅದರ ನಿರ್ವಹಣೆಗೆ ತಂತ್ರಜ್ಞಾನಗಳನ್ನು
ಅಭಿವೃದ್ಧಿಪಡಿಸುತ್ತಿರುವ ಬಳ್ಳಾರಿ ಸಂಶೋಧನಾ ಕೇಂದ್ರದ ಪ್ರಾಮುಖ್ಯತೆಯನ್ನು ವಿವರಿಸಿದರು. ಕೇಂದ್ರದ ಅದ್ಭುತವಾದ ಹಿಂದಿನ ಸಾಧನೆಗಳನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಸಂರಕ್ಷಣಾ ಸಂಸ್ಥೆಯ ಮುಖ್ಯ ಕಚೇರಿ, ಡೆಹರಾಡೂನ್ ಮತ್ತು ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ (ಐಸಿಎಆರ್) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಳ್ಳಾರಿಯ ಸಂಶೋಧನಾ ಕೇಂದ್ರವನ್ನು ಅತ್ಯುತ್ತಮ ಕೇಂದ್ರಗಳಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ವ್ಯಕ್ತಪಡಿಸಿದರು.