ಬಳ್ಳಾರಿ : ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯದಿಂದ ಮಾನವನ ದೇಹದ ಅಂಗಾಂಗಳು ಹಾನಿಯಾಗುತ್ತಿದ್ದು. ಪ್ರತಿಯೊಬ್ಬರು ಮರಣಾನಂತರ ಅಂಗಾಂಗ ದಾನ ಮಾಡಿ ಸಾರ್ಥಕತೆ ಹೊಂದಿ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೌಲಬಜಾರನ ಆಡಳಿತ ವೈಧ್ಯಧಿಕಾರಿ ಡಾ. ನರಸಿಂಹಮೂರ್ತಿ ಹೇಳಿದರು.
ನಗರದ ಕೌಲಬಜಾರ್, ನಾಯ್ಡು ಸ್ಟ್ರೀಟ್, ರೇಡಿಯೊ ಪಾರ್ಕ್ ಸೇರಿದಂತೆ ನಗರದ ನಾನಾ ಕಡೆ ಬಳ್ಳಾರಿಯ ಕೌಲಬಜಾರ್ ನಗರ ಪ್ರಾಥಮಿಕ ಆರೋಗ್ಯ ಇಲಾಖೆ ತಂಡ ಭೇಟಿ ನೀಡಿ ಜನರಿಗೆ ಅಂಗಾಂಗ ಜಾಗೃತಿ ಮೂಡಿಸಿ, ೧೦೨ ಜನರ ಮೂಲಕ ಅಂಗಾಂಗ ದಾನ ನೊಂದಾಣಿಸಿ ಮಾತನಾಡಿದ ಅವರು, ಇತ್ತೀಚೆಗೆ ಮನುಷ್ಯರಲ್ಲಿ ಲೀವರ್, ಕಿಡ್ನಿ, ಕಣ್ಣು, ಹೃದಯ ಸೇರಿ ದೇಶದ್ಯಾಂತ ಎರಡು ಸಾವಿರಕ್ಕೂ ಅಧಿಕ ಜನರು ಬೇಡಿಕೆಗಾಗಿ ನಿತ್ಯ ನೊಂದಾಣಿ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅಂಗಾಂಗ ದಾನ ಮಾಡುವವರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ, ಎಲ್ಲರೂ ಮರಣದ ನಂತರ ಅಂಗಾಂಗ ದಾನ ಮಾಡಿ ಇನ್ನೊಬರ ಬಾಳಿಗೆ ಬೆಳಕಾಗಿ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ. ರಮೇಶಬಾಬು ಮಾರ್ಗದರ್ಶನದಲ್ಲಿ ನಾಲ್ಕು ನೂರಕ್ಕೂ ಅಧಿಕ ಜನರು ನೊಂದಾಣಿ ಮಾಡಿಕೊಂಡಿದ್ದಾರೆ. ಕಣ್ಣು ದಾನ ಮಾಡಲು ಒಪ್ಪಿದ್ದಲ್ಲಿ, ವ್ಯಕ್ತಿ ಮರಣ ಹೊಂದಿದ ನಂತರ ಆರು ಗಂಟೆಯೊಳಗೆ ಕಣ್ಣು ದಾನ ಮಾಡಬಹುದಾಗಿದೆ.
ಸಾಮಾನ್ಯವಾಗಿ ಜನರಲ್ಲಿ ಕಣ್ಣಿನ ದಾನ ಮಾಡಿದರೆ ಕಣ್ಣಿನ ಗುಡ್ಡೆಯನ್ನೆ ಸಂಪೂರ್ಣವಾಗಿ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ ಆದರೆ ವಾಸ್ತವಾಗಿ ಕಣ್ಣಿನ ಕಪ್ಪು ಭಾಗದಲ್ಲಿಯ ಕಾರ್ನಿಯಾ ( ಲೆನ್ಸ್ ) ಮಾತ್ರ ತೆಗೆದುಕೊಳ್ಳುತ್ತಾರೆ. ದಾನ ಮಾಡಿದ ನಂತರ ಮುಖ ವಿಕಾರವಾಗುವುದಿಲ್ಲ ಎಂದು ಮಾಹಿತಿ ನೀಡಿದರು.
ಹೃದಯ, ಕಿಡ್ನಿ , ಲಿವರ್, ಮೇದೋಜೀರಕ ಗ್ರಂಥಿ, ಕರಳು ಮುಂತಾದವು ಆಕಸ್ಮಿಕವಾಗಿ ಯಾವುದಾದರೂ ಘಟನೆಗಳಿಂದ ಮೆದುಳು ನಿಷ್ಕ್ರಿಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿ ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ ಇದ್ದ ವೇಳೆ ವೈದ್ಯಕೀಯ ತಂಡವು ರೋಗಿಯ ಪಾಲಕರಿಗೆ ತಿಳಿಸಿದಂತ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಒಪ್ಪಿಗೆ ನೀಡಿದಲ್ಲಿ ಇತರೆ ಅಂಗಾಂಗಗಳನ್ನು ದಾನ ಮಾಡುವ ಅವಕಾಶವಿದೆ.
ನ್ಯಾಷನಲ್ ಆರ್ಗನ್ ಆ್ಯಂಡ್ ಟಿಶ್ಯೂ ಟ್ರಾನ್ಸ್‌ಪ್ಲಂಟ್ ಆರ್ಗನೈಸೇಷನ್ (NOTTO ) ಮೂಲಕ ನೊಂದಾಣಿ ಮಾಡಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಪ್ರತಿಯೊಬ್ಬರು ತಮ್ಮ ಮೊಬೈಲ್‌ಗಳಲ್ಲಿ ನೋಂದಾಣಿಗೆ ಅವಕಾಶವಿದೆ. ನೊಂದಾಣಿ ಮಾಡಿಸಿದ ನಂತರ ಪ್ರಮಾಣ ಪತ್ರವೂ ಮೊಬೈಲ್‌ನಲ್ಲಿಯೇ ಪಡೆಯಬಹುದು ಎಂದು ಹೇಳಿದರು. ನಗರ ಆರೋಗ್ಯ ಕೇಂದ್ರದ ಶೂಶ್ರುಷಣಾಧಿಕಾರಿಗಳು ಪಿಹೆಚ್‌ಸಿಒ ಸುನಿತಾ, ಗಂಗಾ ಭವಾನಿ, ಹೋನ್ನುರಬಿ, ಸುಷ್ಮೀತಾ, ರುಕ್ಮಿಣಿ, ಹೆಚ್‌ಐಒ ಅರುಣ್‌ಕುಮಾರ್, ಚಂದ್ರಾನಾಯ್ಕ್, ಮಲ್ಲೇಶ್, ಆಶಾ ಕಾರ್ಯಕರ್ತೆಯರು ನೊಂದಾಣಿ ಮಾಡಿಸುವ ಕಾರ್ಯಕೈಗೊಂಡಿದ್ದಾರೆ ಎಂದು ತಿಳಿಸಿದರು.