ಬೆಂಗಳೂರು: ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಕಾಪಿ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯನವರೇ, ಪಂಜಾಬ್‌ನಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿರುವ ಯೋಜನೆಯನ್ನು ಕೂಡ ಕಾಪಿ ಮಾಡಿ ರಾಜ್ಯದ ಅತಿಥಿ ಉಪನ್ಯಾಸಕರ ಕೆಲಸವನ್ನು ಕಾಯಂಗೊಳಿಸಿ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಒತ್ತಾಯಿಸಿದರು.
12 ತಿಂಗಳ ವೇತನ, ಸೇವಾಭದ್ರತೆ, ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ, ಖಾಸಗಿ ನೌಕರರ ರೀತಿ ಗ್ಯಾಚ್ಯುಟಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿದ ಉದಾಹರಣೆ ಇಲ್ಲ ಎಂದಿರುವ ಉನ್ನತ ಶಿಕ್ಷಣ ಸಚಿವ ಡಾ. ಎ.ಸಿ. ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಪೃಥ್ವಿ ರೆಡ್ಡಿ ಅವರು ದೆಹಲಿ, ಪಂಜಾಬ್ ಸರ್ಕಾರಗಳು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿರುವ ದಾಖಲೆಗಳನ್ನು ಮುಂದಿಟ್ಟು ಸೇವಾ ಭದ್ರತೆ ಒದಗಿಸುವಂತೆ ಸವಾಲು ಒಡ್ಡಿದರು.
2023ರ ಜುಲೈನಲ್ಲಿ ಪಂಜಾಬ್‌ನಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಲಾಗಿದೆ. ಮಾತ್ರವಲ್ಲದೆ 9,500 ರೂ. ಇದ್ದ ಸಂಬಳವನ್ನು 20,500 ರೂ.ಗೆ ಹೆಚ್ಚಿಸಲಾಗಿದೆ. ಆದರೆ, ಕರ್ನಾಟದಲ್ಲಿ 10,500 ರೂ. ಇದ್ದ ಸಂಬಳವನ್ನು 12,000 ರೂ.ಗೆ ಹೆಚ್ಚಿಸಿ ಕೈತೊಳೆದುಕೊಂಡಿದ್ದಾರೆ ಎಂದರು.
12th ಫೇಲ್ ಎನ್ನುವ ಸಿನಿಮಾದಲ್ಲಿ ಚಂಬಲ್ ಎನ್ನುವ ಪ್ರಾಂತ್ಯದ ಸಣ್ಣ ಹಳ್ಳಿಯ ಹುಡುಗನೊಬ್ಬ 12ನೇ ತರಗತಿ ಫೇಲಾದರೂ ಛಲ ಬಿಡದೆ ಐಎಎಸ್ ಓದಿ ಪಾಸು ಮಾಡಿದ್ದಾನೆ. ಅದು ನೈಜ ಘಟನೆ ಆಧರಿತ ಸಿನಿಮಾ. ಅಂತಹ ಹುಡುಗರ ಕನಸು ನನಸಾಗಿಸುವಲ್ಲಿ ಉಪನ್ಯಾಸಕರ ಪಾತ್ರ ಬಹಳ ಮುಖ್ಯ. ಆ ಸಿನಿಮಾದ ಕೊನೆಯಲ್ಲಿ ಒಂದು ಸಂಭಾಷಣೆ ಇದೆ. ಜನರನ್ನು ಅವಿದ್ಯಾವಂತರನ್ನಾಗಿ ಇಟ್ಟುಕೊಂಡಿರುವುದಕ್ಕೆ ರಾಜಕೀಯ ನಾಯಕರು ಕಾರಣ. ಸುಳ್ಳು ಭರವಸೆ ನೀಡಿ ಮತ ಪಡೆಯಬಹುದು ಎನ್ನುವ ಒಂದು ಕಾರಣಕ್ಕಾಗಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎನ್ನುವ ಸಂದೇಶವಿದೆ ಎಂದರು.
ಬಹುತೇಕ ಶಾಸಕರು, ಸಚಿವರು ಖಾಸಗಿ ಶಾಲಾ-ಕಾಲೇಜುಗಳನ್ನು ನಡೆಸುತ್ತಿದ್ದಾರೆ. ನಮ್ಮ ದಂಧೆ ಬಂದ್ ಆಗುತ್ತೆ ಎಂದೇ ಸರ್ಕಾರಿ ಶಾಲೆ-ಕಾಲೇಜುಗಳನ್ನು ಕಡೆಗಣಿಸುತ್ತಿದ್ದಾರೆ. ಕಾಪಿ ಮಾಡಲಾದ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಜಾರಿಗೆ ತರಲು 50,000 ಕೋಟಿ ರೂ. ಹಣ ವ್ಯಯಿಸುತ್ತಿದ್ದೀರಿ, ಆದರೆ, ಅತಿಥಿ ಉಪನ್ಯಾಸಕರ ನೇಮಕ ಮಾಡಲು 100 ಕೋಟಿ ರೂ. ಹಣಕ್ಕೆ ಕೊರತೆಯುಂಟಾಗಿದೆಯೇ?. ಬೇರೆ ಯೋಜನೆಗಳಿಗೆ ಖರ್ಚು ಮಾಡಿದ್ರೆ ಕಮಿಷನ್ ಸಿಗುತ್ತೆ. ಆದರೆ, ಅತಿಥಿ ಉಪನ್ಯಾಸಕರ ಸಂಬಳದಲ್ಲಿ ಕಮಿಷನ್ ಕೇಳಲು ಆಗಲ್ಲ. ಇದೇ ಕಾರಣಕ್ಕೆ ಅತಿಥಿ ಉಪನ್ಯಾಸಕರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಆರೋಪಿಸಿದರು.
ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ನೀಡಿದೆ. ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಮಾಧ್ಯಮ ಉಸ್ತುವಾರಿ ಜಗದೀಶ್ ವಿ. ಸದಂ, ಸೋಷಿಯಲ್ ಮೀಡಿಯಾ ಮುಖ್ಯಸ್ಥ ದರ್ಶನ್ ಜೈನ್, ಮುಖಂಡರಾದ ಉಷಾ ಮೋಹನ್, ಅನಿಲ್ ನಾಚಪ್ಪ, ವಿಶ್ವನಾಥ್ ಸೇರಿದಂತೆ ಹಲವರು ಪಾಲ್ಗೊಂಡು, ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ಸೂಚಿಸಿದರು.