ಬಳ್ಳಾರಿ : ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಲೆದಾಡಿ ಪರಿಹಾರ ಸಿಗದೇ, ತ್ವರಿತ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ರೂಪಿಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಅಹವಾಲುಗಳಿದ್ದಲ್ಲಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದಲ್ಲಿನ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಳ್ಳಾರಿ ತಾಲ್ಲೂಕು ಮಟ್ಟದ ‘ಜನಸ್ಪಂದನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ ತಿಂಗಳಿಗೆ ಎರಡು ಬಾರಿ ಜನ ಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಮ್ಮಿಕೊಳ್ಳುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ನೀಡಲಾಗುತ್ತಿದೆ. ಸಮಸ್ಯೆಗಳಿರುವ ಸಾರ್ವಜನಿಕರು ಜನಸ್ಪಂದನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿ, ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಇಂದು ನಡೆಯುವ ಜನಸ್ಪಂದನ ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿ, ಕೂಲಂಕುಶವಾಗಿ ಪರಿಶೀಲಿಸಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಡನೆ ಚರ್ಚಿಸಿ, ತ್ವರಿತವಾಗಿ ಪರಿಹಾರ ನೀಡಲಾಗುವುದು ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
‘ನಾನು ವೃದ್ಧೆ ಸ್ವಾಮಿ, ಸರ್ಕಾರ ನೀಡುವ ಪಿಂಚಣಿಯಿಂದ ಜೀವನ ನಡೆಸುತ್ತಿದ್ದೆ, ಈ ಮೊದಲು 1200 ಪಿಂಚಣಿ ಕೊಡ್ತಿದ್ರು, ಆಮೇಲೆ 600 ಬರ್ತಿತ್ತು. ಈಗ 6 ತಿಂಗಳಿನಿಂದ ಯಾವ ಪಿಂಚಣಿ ಬರ್ತಾ ಇಲ್ಲ, ಜಿಲ್ಲಾಧಿಕಾರಿ ಸಾಹೇಬ್ರು ಅದರ ಬಗ್ಗೆ ವಿಚಾರಿಸಿ ಪರಿಹಾರ ನೀಡ್ಬೇಕು’ ಎಂದು ಬಳ್ಳಾರಿ ತಾಲ್ಲೂಕಿನ ಬೀಸನಹಳ್ಳಿ ಗ್ರಾಮದ ನಿವಾಸಿ ಹುಲಿಗೆಮ್ಮ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ಉತ್ಸುಕರಾಗಿಯೇ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಿದರು. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ ಪರಿಹಾರ ನೀಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಒಟ್ಟು 130 ಅರ್ಜಿ ಸಲ್ಲಿಕೆ:
ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ಒಟ್ಟು 130 ಅರ್ಜಿಗಳು ಸ್ವೀಕೃತಗೊಂಡವು.
ಕಂದಾಯ ಇಲಾಖೆ 54, ಭೂ ದಾಖಲೆ ಉಪನಿರ್ದೇಶಕರ ಕಚೇರಿ 21, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 14, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 1, ಬಳ್ಳಾರಿ ಮಹಾನಗರ ಪಾಲಿಕೆ 1, ಗ್ರಾಮೀಣ ಕುಡಿಯುವ ನೀರು ಒಳಚರಂಡಿ ವಿಭಾಗ 4, ಅರಣ್ಯ ಇಲಾಖೆ 1, ಸಮಾಜ ಕಲ್ಯಾಣ ಇಲಾಖೆ 1, ಗಣಿ ಮತ್ತು ಭೂ ವಿಜ್ಞಾನ 2, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2, ಕೃಷಿ ಇಲಾಖೆ 2, ಲೋಕೋಪಯೋಗಿ ಇಲಾಖೆ 2, ನೀರಾವರಿ ನಿಗಮ ಮತ್ತು ಸಣ್ಣ ನೀರಾವರಿ 2, ಎನ್‍ಇಕೆಎಸ್‍ಆರ್‍ಟಿಸಿ 4, ಕಾರ್ಮಿಕ ಇಲಾಖೆ 2, ಕೆಎಸ್‍ಟಿಐಡಿಸಿ 1, ಪೊಲೀಸ್ ಇಲಾಖೆ 1, ಮಾಲಿನ್ಯ ನಿಯಂತ್ರಣ ಮಂಡಳಿ 1, ಜೆಸ್ಕಾಂ 1, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ 1 ಪಶು ಸಂಗೋಪನೆ ಇಲಾಖೆ 1 ಸೇರಿದಂತೆ ಒಟ್ಟು 130 ಅರ್ಜಿ ಸ್ವೀಕಾರಗೊಂಡವು.
ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕಾರ ಮಾಡಲು 15 ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. 60 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾಸ್ಕ್ ವಿತರಿಸಿ ಮುಂಜಾಗ್ರತೆ ಕ್ರಮ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ತಹಶೀಲ್ದಾರ ಗುರುರಾಜ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು
.