ಕೂಡ್ಲಿಗಿ: ದೇಶದಲ್ಲಿ ಸಮಾನತೆ, ನೆಮ್ಮದಿಗೆ ಅಂಬೇಡ್ಕರ್ ಅವರ ಚಿಂತನೆ ಅಳವಡಿಸಿಕೊಳ್ಳಬೇಕು ಎಂದರು. ತಾಲೂಕಿನ ಗುಡೆಕೋಟೆ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕ ವಿದ್ಯಾರ್ಥಿಗಳ ನಿಲಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಂಘ (ನೋಂ) ವತಿಯಿಂದ ಡಾ ಬಿಆರ್ ಅಂಬೇಡ್ಕರ್ ಚಿಂತನೆ 2ನೇ ಕಾರ್ಯಕ್ರಮವನ್ನು ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್‌ರವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೆ ಆದರ್ಶವಾಗ ಬೇಕು, ಅವರು ಜ್ಞಾನಾರ್ಜನೆಗೆ ತೋರಿದ ಆಸಕ್ತಿ, ಸಂಪನ್ಮೂಲಗಳನ್ನು ಬಳಸಿಕೊಂಡ ಬಗೆ, ಸಮಾಜದ ಬೆಳವಣಿಗೆಗೆ ಶಿಕ್ಷಣವನ್ನು ಉಪಯೋಗಿಸಿ ಕೊಂಡ ರೀತಿ, ದೇಶಕ್ಕೆ ತೋರಿದ ಗೌರವ ಮತ್ತು ದೇಶಪ್ರೇಮ ಹಾಗೂ ಇಡೀ ಭಾರತವನ್ನು ಸಮಗ್ರವಾಗಿ ನೋಡಿದ ಪರಿ ಎಲ್ಲವೂ ಅನುಕರಣೀಯ ಮತ್ತು ಆದರ್ಶ ಅಂತಹ ಮಹಾನ್ ಸ್ಫೂರ್ತಿಯ, ಮಾನವತಾವಾದಿ ಎಂದರು.
ಈ ವೇಳೆ ಡಾ ರಾಜಣ್ಣ ಪ್ರಾಂಶುಪಾಲರು ಡಾ ಬಿ ಆರ್ ಅಂಬೇಡ್ಕರ್ ಬಗ್ಗೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು ಅವರು ಭಾರತೀಯ ಇತಿಹಾಸದಲ್ಲಿ ಅಪ್ರತಿಮ ವ್ಯಕ್ತಿಯಾಗಿದ್ದಾರೆ, ಅವರು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಅನ್ವೇಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಕೆಲಸವು ಭಾರತೀಯ ಸಮಾಜದ ಮೇಲೆ ಅಳಿಸಲಾಗದ ಗುರುತು ಬಿಟ್ಟಿದೆ ಮತ್ತು ಹೆಚ್ಚು ನ್ಯಾಯಯುತ ಮತ್ತು ಸಮಾನ ಸಮಾಜಕ್ಕಾಗಿ ಅವರ ದೃಷ್ಟಿಕೋನವು ಇಂದಿಗೂ ಪ್ರಸ್ತುತ ಮತ್ತು ಸ್ಪೂರ್ತಿದಾಯಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಮಾತನಾಡಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರು ಜಾತಿ, ಧರ್ಮಗಳಿಂದ ಮೀರಿದ ಬೆಳಕುಗಳು. ಜಗತ್ತಿನ ಮಹಾನ್ ದಾರ್ಶನಿಕರು. ಶಿಕ್ಷಣ ಮತ್ತು ಸಂಸ್ಕಾರಗಳಿಂದ ವ್ಯಕ್ತಿ ಪರಿಪೂರ್ಣನಾಗುತ್ತಾನೆಂದು ಸಾರಿದವರು. ಸಮ ಸಮಾಜದ ನಿರ್ಮಾಣಕ್ಕಾಗಿ ಸಂಪೂರ್ಣ ಸಮರ್ಪಿಸಿಕೊಂಡವರು. ಅವರ ಬದುಕು, ಚಿಂತನೆಗಳು ಸರ್ವ ಕಾಲಕ್ಕೂ ಅನುಕರಣೀಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗುಡೇಕೋಟೆ ಗ್ರಾ.ಪಂ ಅಧ್ಯಕ್ಷರು ಕೃಷ್ಣ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿದರು ಸಮಾಜದ ಎಲ್ಲ ವರ್ಗಗಳು ಶೋಷಣೆಗಳಿಂದ ಮುಕ್ತವಾಗಿ ಬದುಕಲು ಅರಿವು ಅಗತ್ಯ. ದಾರ್ಶನಿಕರಾಗಿದ್ದ ಬುದ್ಧ, ಬಸವಣ್ಣ, ಡಾ. ಬಿ ಆರ್ ಅಂಬೇಡ್ಕರ್ ಸಮಾಜದ ಸಮಸ್ಯೆಗಳನ್ನು ನಿವಾರಿಸಲು ಆತ್ಮದ ಅರಿವು ದಿವ್ಯೌಷಧವಾಗಿದೆಯೆಂದು ಸಾರಿದವರು. ಆ ಮೂಲಕ ಸಮ ಸಮಾಜವನ್ನು ಕಟ್ಟ ಬಯಸಿದವರು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ನಿಲಯ ಪಾಲಕರು ಶ್ರೀಕಾಂತ್, ಬಿಸಿಎಂ ಇಲಾಖೆ ನಿಲಯ ಪಾಲಕರು ಬಿ ಹುಲುಗಪ್ಪ ಸ್ವಾಗತಿಸಿದರು, ಗ್ರಾ.ಪಂ ಸದಸ್ಯ ಸುನಿತಾ ತಿಪ್ಪೇಸ್ವಾಮಿ, ಪತ್ರಕರ್ತರರಾದ ಡಿ.ಎಂ ಈಶ್ವರಪ್ಪ, ಜಿ.ಟಿ ರಾಜಶೇಖರ್ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.