ಬೆಂಗಳೂರು : ರಾಜ್ಯದಲ್ಲಿ ಎಸ್.ಸಿ., ಎಸ್.ಟಿ., ಮತ್ತು ಓಬಿಸಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಸಂಖ್ಯೆ 80 ಲಕ್ಷಕ್ಕೂ ಅಧಿಕ ಇದ್ದು, ಇದುವರೆಗೆ ಇವರ ಸರ್ವಾಂಗೀಣ ಪ್ರಗತಿ ಆಗಿಲ್ಲ. ರಾಜ್ಯ ಸರ್ಕಾರ ಕೂಡಲೇ ಹಿಂದುಳಿದ ಅಲೆಮಾರಿಗಳ ಆಯೋಗ ರಚಿಸಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಹಾಗೂ ರಾಜಿಕೀಯವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಅಖಿಲ ಭಾರತೀಯ ಗೋಂಧಳಿ ಸಮಾಜ ಸಂಘಟನೆ ರಾಜ್ಯಾಧ್ಯಕ್ಷ ಡಾ.ಸಿದ್ಧರಾಮ ಡಿ.ವಾಘಮಾರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಸೋಮವಾರ ಸಂಜೆ ವಿಧಾನಸೌಧದ 344ನೇ ಸಮ್ಮೇಳನ ಸಭಾಂಗಣದಲ್ಲಿ ನಡೆದ ಹಿಂದುಳಿದ ವರ್ಗಗಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಮುಖಂಡರೊಂದಿಗೆ 2024-25ನೇ ಸಾಲಿನ ಆಯವ್ಯಯ ಪೂರ್ವಭಾವಿ ಚರ್ಚೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿರುವ ಅವರು, ಅಲೆಮಾರಿಗಳ ಬಗ್ಗೆ ತಪ್ಪು ಕಲ್ಪನೆಗಳಿವೆ. ಬುಡಕಟ್ಟು ಅಲೆಮಾರಿ ಸಮುದಾಯಗಳು ಇಂದು ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಸರ್ಕಾರಗಳ ನಿರ್ಲಕ್ಷ್ಯದಿಂದ ಯಾವುದೇ ಪ್ರೋತ್ಸಾಹ ಇಲ್ಲದೇ ಎಲ್ಲ ಕ್ಷೇತ್ರಗಳಲ್ಲೂ ಹಿಂದೆ ಬಿದ್ದಿವೆ. ಅಲೆಮಾರಿಗಳಲ್ಲದ ವ್ಯಕ್ತಿಗೆ ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗಗಳ ಅಲೆಮಾರಿ ನಿಗಮಕ್ಕೆ ಅಧ್ಯಕ್ಷರಾಗಿ ಅಥವಾ ಯಾವುದೇ ಪದಾಧಿಕಾರಿ ಹುದ್ದೆಗೆ ನೇಮಕ ಮಾಡಬಾರದು. ಅಲೆಮಾರಿಗಳನ್ನೇ ನಿಗಮಕ್ಕೆ ನಿಯೋಜಿಸಬೇಕೆಂದರು.
46 ಜಾತಿಗಳಿಂದ ಕೂಡಿದ ಹಿಂದುಳಿದ ವರ್ಗದವರು, ಅಲೆಮಾರಿ, ಅರೆ ಅಲೆಮಾರಿ ಜನಾಂಗದವರ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಹಿಂದುಳಿದ ವರ್ಗಗಳ ಆಯೋಗ ರಚಿಸಬೇಕು. ಮೈಸೂರು ವಿಶ್ವವಿದ್ಯಾಲಯ ಅಥವಾ ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಅಧ್ಯಯನ ಕೇಂದ್ರ ಆರಂಭಿಸಬೇಕು. ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸಬೇಕು. ಆರೋಗ್ಯ ಚಿಕಿತ್ಸೆಗೆ ರೂ.5 ಲಕ್ಷ ದ ವರೆಗೆ ಆರೋಗ್ಯ ಸೇವೆ ಒದಗಿಸಬೇಕು. ಅಲೆಮಾರಿ ಬುಡಕಟ್ಟು ಜಾತಿ ಪ್ರಮಾಣ ಪತ್ರ ನೀಡಬೇಕು. ಕುಲಶಾಸ್ತ್ರೀಯ ಅಧ್ಯಯನಕ್ಕೆ ರೂ.10 ಕೋಟಿ ಅನುದಾನ ಮೀಸಲಿಡಬೇಕು. ವರದಿಯನ್ನು ಕೇಂದ್ರಕ್ಕೆ ರವಾನಿಸಬೇಕು. ಟೆಂಟ್ ಮತ್ತು ಗುಡಿಸಲಿನಲ್ಲಿ ವಾಸ ಮಾಡುವವರಿಗೆ ವಸತಿ ಸೌಕರ್ಯ ಒದಗಿಸಬೇಕು. ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸಬೇಕು. ನೇರ ನೇಮಕಾತಿಯಲ್ಲೂ ಹಿಂದುಳಿದವರಿಗೆ ಅವಕಾಶ ಒದಗಿಸಬೇಕು. ಎಲ್ಲ ಕುಟುಂಬದವರಿಗೆ ತಲಾ ಎರಡು ಎಕರೆ ಜಮೀನು ಒದಗಿಸಬೇಕು. ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ಸೌಕರ್ಯ ಹಾಗೂ ಶಿಕ್ಷಣ ಒದಗಿಸಬೇಕು. ದೇವರಾಜ್ ಅರಸ್ ಸಂಶೋಧನಾ ಸಂಸ್ಥೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿಸಬೇಕು. ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳಿಗೆ ಸಮುದಾಯ ಭವನ ನಿರ್ಮಾಣ, ಶಾಲೆ, ಕಾಲೇಜು ಆರಂಭಿಸಲು ಹಣಿಕಾಸಿನ ನೆರವು ಒದಗಿಸಬೇಕು. ಹಿಂದುಳಿದ ಇಲಾಖೆಗೆ ಹಿಂದುಳಿದ ವರ್ಗಗಳ ನೌಕರರನ್ನೇ ನೇಮಕ ಮಾಡಬೇಕು. ಜನಾಂಗದ ಅಭಿವೃದ್ಧಿಗೆ ಬಜೆಟ್ ನಲ್ಲಿ ರೂ.10 ಸಾವಿರ ಕೋಟಿ ಅನುದಾನ ಮೀಸಲಿಡಬೇಕು. ತಾರತಮ್ಯ ಮಾಡದೇ ಜನಾಂಗದ ಸರ್ವಾಂಗೀಣ ಪ್ರಗತಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಪ.ಜಾ., ಪ.ಪಂಗಡಗಳ ಅಲೆಮಾರಿಗಳ ಮತ್ತು ಹಿಂದುಳಿದ ವರ್ಗಗಳ 46 ಜಾತಿ ಅಲೆಮಾರಿಗಳ ತಾರತಮ್ಯವನ್ನು ಸರಿಪಡಿಸಬೇಕು. ಕೇಂದ್ರದಿಂದ ಬರುವ ಅನುದಾನದ ಉಪಯೋಗ ಹಿಂದುಳಿದ ಅಲೆಮಾರಿಗಳಿಗೆ ಸಿಗುತ್ತಿಲ್ಲ. ಒಬ್ಬ ಜಾತಿಯವರು ಒಂದು ಕಡೆ ಲಾಭ ತೆಗೆದುಕೊಳ್ಳಬೇಕು. ಎರಡೆರಡು ಕಡೆ ಲಾಭ ತೆಗೆದುಕೊಳ್ಳದಂತೆ ಮುತುವರ್ಜಿವಹಿಸಿ ಕಟ್ಟುನಿಟ್ಟಿನ ಆದೇಶ ಮಾಡಬೇಕು. ಗೋಂಧಳಿ ಜನಾಂಗದವರಿಗೆ 75 ವರ್ಷಗಳಿಂದಲೂ ಅನ್ಯಾಯವಾಗಿದೆ. ಇಲ್ಲಿಯವರೆಗೆ ಸರ್ಕಾರದಲ್ಲಿ ಉನ್ನತ ಸ್ಥಾನ
ಮಾನ ಸಿಕ್ಕಿಲ್ಲ. ಆದಕಾರಣ ಪಕ್ಷದಲ್ಲಿರುವ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಸಾಮಾಜಿಕ ನ್ಯಾಯ ಒದಗಿಸಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಾಗಲಿ, ವಿಧಾನ ಪರಿಷತ್ತ ಸದಸ್ಯರಾಗಲಿ, ರಾಜ್ಯಸಭಾ ಸದಸ್ಯರಾಗಲಿ ಶೋಷಿತರಿಗೆ ನೇಮಕ ಮಾಡಿ ಅಭಿವೃದ್ಧಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಆ ಮೂಲಕ ಮೀಸಲಾತಿ ಒದಗಿಸಬೇಕು ಎಂದರು.
ಗೋಂಧಳಿ ಸಮಾಜದ ಕಲಾವಿದರಿಗೆ ಮಾಶಾಸನ, ಅನುದಾನ, ವಾದ್ಯ ಪರಿಕರಗಳ ಪೀಠೋಪಕರಣಗಳನ್ನು ಖರಿದಿ ಮಾಡಲು ರೂ.5 ಲಕ್ಷ ಹಣಕಾಸಿನ ನೆರವು ನೀಡಲು ಆದೇಶಿಸಬೇಕು. ನೆನೆಗುದ್ದಿಗೆ ಬಿದ್ದಿರುವ ಕಲಾವಿದರ ಮಾಶಾಸನಗಳನ್ನು ಈ ಕೂಡಲೇ ಸರ್ಕಾರದಿಂದ ಬಿಡುಗಡೆ ಮಾಡುವಂತೆ ಸಂಬಂಧ ಪಟ್ಟ ಸಚಿವರಿಗೆ, ಕಾರ್ಯದರ್ಶಿಗಳಿಗೆ, ನಿದೇಶಕರಿಗೆ ಸೂಚಿಸಬೇಕು. ವಸತಿ ರಹಿತ-ಸಹಿತ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳಾದ ಸಿ.ಸಿ ರಸ್ತೆ, ಸಮುದಾಯ ಭವನಗಳು, ಕಲಾ ಭವನಗಳು, ಮನೆ ಕಟ್ಟಿಕೊಳ್ಳಲು ಭೂ ಖರೀದಿಸಲು ಶೈಕ್ಷಣಿಕ ಶಿಕ್ಷಣ ಸಾಲ ಸೌಲಭ್ಯದ ಅರಿವು ಮೂಡಿಸಲು, ಯೋಜನೆಗಳನ್ನು ಅನುಷ್ಠಾನ ತರಲು ಪ್ರತ್ಯೇಕ 500 ಕೋಟಿ ಹಣವನ್ನು ಆಯವಯದಲ್ಲಿ ಮೀಸಲಿಡಬೇಕು. ವಿದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳೀಗೆ ವಿದ್ಯಾರ್ಥಿ ವೇತನ ಸಕಾಲಕ್ಕೆ ನೀಡಬೇಕೆಂದು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಇಂಧನ ಸಚಿವ ಕೆ.ಜೆ ಜಾರ್ಜ್, ಸಚಿವರಾದ ಡಿ.ಸುಧಾಕರ್, ಮಾಜಿ ಸಚಿವ ಎಚ್.ಆಂಜನೇಯ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಶಾಸಕ ವೇಣುಗೋಪಾಲ್, ಹತ್ತಕ್ಕೂ ಹೆಚ್ಚು ಮಂದಿ ಶಾಸಕರು ಹಾಗೂ ಹಿಂದುಳಿದ, ಅತಿ ಹಿಂದುಳಿದ, ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ 260 ಕ್ಕೂ ಹೆಚ್ಚು ಮಂದಿ ಮುಖಂಡರು, ಪ್ರತಿನಿಧಿಗಳು, ತೆಲಂಗಾಣ ಗೋಂಧಳಿ ಸಮಾಜದ ಸಂಘದ ರಾಜ್ಯಾಧ್ಯಕ್ಷ ಏಕನಾಥ್ ದುಣಗೆ, ಸಮಾಜದ ಚಿಂತಕರಾದ ಮಾರ್ತಂಡಪ್ಪ ನಾಯ್ಕಲ್, ತುಕಾರಾಮ ವಾಷ್ಟರ್ ಮತ್ತು ಸಿಂಧೆ ಸೇರಿದಂತೆ ಹಲವಾರು ಗಣ್ಯರು ಇದ್ದರು.